ಕನ್ನಡ ಜನಪದ ಸಾಹಿತ್ಯ: ಕಥನ ವಿಚಾರಗಳು
Abstract
ಕನ್ನಡ ಜನಪದ ಸಾಹಿತ್ಯ ಎಂದರೆ ಜನಪದ ಸಂಕಥನವೇ ಅಗಿದೆ. ಕಥನವೆಂದರೆ, ಒಂದು ನಿರ್ದಿಷ್ಟ ಘಟನೆಯೊಂದರ ಸುತ್ತ ಅನಕ್ಷರಸ್ಥ ಜನಪದ ಮನಸ್ಸುಗಳು ತೀವ್ರವಾಗಿ ಅನುಭವಿಸಿ ಕಟ್ಟಿದ ಸಾಹಿತ್ಯ ಪ್ರಕಾರ. ಜನಪದ ಸಾಹಿತ್ಯ ಜನಪದ ಬದುಕಿನಷ್ಟೆ ಸಹಜವಾದುದು. ಅದು ಸರಳವೂ ಮತ್ತು ಸುಲಭವಾಗಿ ಅರ್ಥವಾಗುವಂಥದ್ದು. ಶಿಷ್ಟ ಸಾಹಿತ್ಯದಂತೆ ತೀವ್ರ ಸಾಹಿತ್ಯಕ ಪರಿಣಾಮಗಳನ್ನುಂಟು ಮಾಡುವ ಉದ್ದೇಶ ಜನಪದದ ಯಾವ ಸಾಹಿತ್ಯ ಪ್ರಕಾರಕ್ಕೂ ಇರುವುದಿಲ್ಲ. ಮೂಲತಃ ಮೌಖಿಕ ಕಲೆಯಾದ ಜಾನಪದವು ಅನಕ್ಷರಸ್ಥ ಸಮಾಜದ ಬದುಕಿನ ಉತ್ಪನ್ನ. ಸಾಮಾನ್ಯವಾಗಿ ದುಡಿಯುವ ವರ್ಗಕ್ಕೆ ಸೇರಿದ ಈ ಸಮಾಜಗಳ ಜೀವನ ವಿನ್ಯಾಸವು ನಿಸರ್ಗ ನಿಯಮಕ್ಕೆ ತೀರ ಹತ್ತಿರವಾಗಿರುತ್ತವೆ. ಪರಿಸರ ಸ್ನೇಹಿ ಬದುಕಿನ ವ್ಯಾಪಾರದ ವ್ಯಾಕರಣವೇ ಜನಪದರ ಬದುಕಿನ ತತ್ತ್ವವಾಗಿರುತ್ತದೆ. ಹೀಗಾಗಿ ಜನಪದ ಸಾಹಿತ್ಯವೆಂದರೆ ಅವರ ಬದುಕಿನಿಂದ ಪ್ರತ್ಯೇಕಿಸಿ ಶುದ್ಧ ಕಲೆಯಂತೆ ಪರಿಭಾವಿಸುವುದು ಸಾಧ್ಯವೇ ಇಲ್ಲ.







